ಪ್ಲೂಟಾರ್ಕ್
 	ಕ್ರಿ.ಶ. ಸುಮಾರು 46-120. ಪ್ರಸಿದ್ಧ ಗ್ರೀಕ್ ಜೀವನ ಚರಿತ್ರಕಾರ ಹಾಗೂ ಪ್ರಬಂಧಕಾರ. ಈತನ ಜನನ ಮರಣ ಪ್ರವಾಸ ಮೊದಲಾದ ಸಂಗತಿಗಳಿಗೆ ನಿಸ್ಸಂದಿಗ್ಧ ತೇದಿಗಳನ್ನು ನಿಷ್ಕರ್ಷಿಸುವ ಪ್ರಯತ್ನ ಇನ್ನೂ ಸಫಲವಾಗಿಲ್ಲ. ಚಕ್ರವರ್ತಿ ಟ್ರೇಜನ್ನನ ಸಾವು ಕ್ರಿ.ಶ. 117ರಂದು ಆಯಿತು. ಪ್ಲೂಟಾರ್ಕನ ನಿಧನ ಅನಂತರ ಜರುಗಿತೆಂಬ ಆಧಾರದ ಮೇಲೆ ಅದು ಕ್ರಿ.ಶ. 120 ಇರಬಹುದು ಎಂದು ನಿರ್ಧರಿಸಿದ್ದಾರೆ. ಚಕ್ರವರ್ತಿ ನೀರೋನ ಅವಧಿಯಲ್ಲಿ ಪ್ಲೂಟಾರ್ಕ್ ಪ್ರವರ್ಧಮಾನನಾಗುತ್ತಿದ್ದನೆಂಬ ಪ್ರಮಾಣದಿಂದ ಅವನು ಹುಟ್ಟಿದ್ದು ಸುಮಾರು ಕ್ರಿ.ಶ. 46 ಎಂದು ಊಹಿಸಿದ್ದಾರೆ. ಅವನ ಹುಟ್ಟಿದ ಊರು ಬೊಈಷಿಯಾ ಪ್ರಾಂತದ ಚಿರೋನಿಯಾ. ಎರಡು ಶತಮಾನಗಳ ಹಿಂದೆಯೇ ಗ್ರೀಸಿನ ಮಹಾಪಟ್ಟಣಗಳು ಚಿಕ್ಕ ಊರುಗಳಾಗಿ ಪರಿವರ್ತನಗೊಂಡುವು; ಗ್ರಾಮಗಳಂತೂ ಬಹುತೇಕ ನಿರ್ನಾಮಗೊಳ್ಳಲಾರಂಭಿಸಿದುವು. ಚಿರೋನಿಯಾ ಮೂರು ಕಾಳಗಗಳು ನಡೆದ ಜಾಗವೆಂದು ಮಾತ್ರ ಹೆಸರು ಉಳಿಸಿಕೊಂಡಿತ್ತು. ಬೊಈಷಿಯಾ ಪ್ರಾಂತ್ಯವೂ ವೈಶಿಷ್ಟ್ಯವೇನೂ ಇಲ್ಲದ ನಾಡಾಗಿಬಿಟ್ಟಿತ್ತು. ಹೀಗಿದ್ದರೂ ಪ್ಲೂಟಾರ್ಕಿಗೆ ಗ್ರೀಸ್ ಎಂದರೆ ಪರಮೋಲ್ಲಾಸ, ಗಾಢಭಕ್ತಿ. ಇವನ ಹುರುಪಿಗೂ ಆವೇಶಕ್ಕೂ ಚಿಲುಮೆಯಾದದ್ದು ದಿವಂಗತ ಮಹಾಪುರುಷರ ಬಗೆಗಿನ ಸುದ್ದಿ. ವಿದ್ಯಾಭ್ಯಾಸಕ್ಕೆ ಅಥೆನ್ಸಿಗೆ ಹೋಗಿ ಮುಖ್ಯವಾಗಿ ಇತಿಹಾಸ ಭೌತಶಾಸ್ತ್ರಗಳಲ್ಲಿ ಪ್ರವೀಣತೆ ಸಂಪಾದಿಸಿದ. ಸಾಹಿತ್ಯವನ್ನೂ ಚೆನ್ನಾಗಿ ಅಧ್ಯಯನ ಮಾಡಿದ. ಎರಡು ಸಾರಿ ರೋಮ್ ನಗರಕ್ಕೆ ಹೋಗಿ ಅಲ್ಲಿ ಗ್ರೀಕ್ ಭಾಷಾ ಬೋಧಕನಾಗಿಯೂ ತತ್ತ್ವಶಾಸ್ತ್ರದ ಉಪನ್ಯಾಸಕನಾಗಿಯೂ ವರ್ಷಗಟ್ಟಲೆ ಉದ್ಯೋಗಪರನಾಗಿದ್ದ. ಅನೇಕ ಪಟ್ಟಣಗಳಿಗೆ ಭೇಟಿಕೊಡುವ ಅವಕಾಶ ಅವನಿಗೆ ದಕ್ಕಿತಾಗಿ ಚಾರಿತ್ರಿಕ ಸ್ಥಳಗಳನ್ನು ಖುದ್ದಾಗಿ ನೋಡುವುದೂ ಅರಿತವರ ಬಾಯಿಂದ ವಿಷಯ ಸಂಗ್ರಹಿಸುವುದೂ ಸಾಧ್ಯವಾಯಿತು. ನಿಯೋಗಿಯ ಜವಾಬ್ದಾರಿ ಕಾರ್ಯವೂ ಇವನ ಪಾಲಿಗೆ ಬಂದಿತ್ತು. ಕೈತುಂಬ ಕೆಲಸ ಇದ್ದದ್ದರಿಂದ ತನಗೆ ಲ್ಯಾಟಿನ್ ಭಾಷೆಯನ್ನು ಕಲಿಯಲೂ ಉಪಯೋಗಿಸಲೂ ವ್ಯವಧಾನ ಇರಲಿಲ್ಲವೆಂದು ತಾನೆ ಹೇಳಿಕೊಂಡಿದ್ದಾನೆ. ಅಲ್ಲದೆ ಆಹ್ವಾನ ಪಡೆದೊ ಇಲ್ಲದೆಯೂ ರೋಮಿಗೆ ಬಂದ ಗ್ರೀಕ್ ವಿದ್ವಾಂಸರ ಆಂತರ್ಯದಲ್ಲಿ ಗ್ರೀಕ್ ಸಾಹಿತ್ಯ ಸಂಸ್ಕøತಿಗಳ ಮುಂದೆ ಲ್ಯಾಟಿನ್ ಸಾಹಿತ್ಯವಾಗಲಿ ರೋಮನ್ ಸಂಸ್ಕøತಿಯಾಗಲಿ ನಿಲ್ಲಲಾರದೆಂಬ ಬಿಗುಮಾನ ರೂಢಮೂಲವಾಗಿತ್ತು. ಎಲ್ಲಿಗೆ ದೇಶಾಟನ ಕೈಗೊಂಡರೂ ಎಷ್ಟು ಕಾಲ ಅಲ್ಲಿ ಇಲ್ಲಿ ಬೀಡು ಬಿಟ್ಟರೂ ಚಿರೋನಿಯಾ ಪ್ಲೂಟಾರ್ಕನ ಎದೆಯೊಲುಮೆಯಾಗಿತ್ತು. ಅಲ್ಲಿಗೆ ಹೋಗಿಬರುತ್ತಿದ್ದ. ಕೊನೆಯ ದಿವಸಗಳನ್ನು ಕಳೆಯಲು ಅಲ್ಲಿಗೇ ಹಿಂದಿರುಗಿದ. ಎಲ್ಲಿ ತನ್ನ ಊರು ಇನ್ನೂ ಕೀಳುಮಟ್ಟಕ್ಕೆ ಇಳಿದೀತೊ ಎಂದು ಅಂಜಿ ತಾನು ಅಲ್ಲಿಯೇ ಇಚ್ಛೆಪಟ್ಟು ನೆಲೆಸಿದೆ ಎಂಬುದು ಅವನ ವಿವರಣೆ. ರೋಮಿನಲ್ಲೊ ಇತರ ಕಡೆಗಳಲ್ಲೊ ಗುರುತುಹಾಕಿಕೊಂಡಿದ್ದ ಟಿಪ್ಪಣಿಗಳನ್ನು ಬಳಸಿಕೊಂಡು ಈತ ತನ್ನ ಬರಹವನ್ನೆಲ್ಲ ಚಿರೋನಿಯಾದಲ್ಲಿಯೆ ಕೈಗೂಡಿಸಿಕೊಂಡಂತೆ ತೋರುತ್ತದೆ.

	ಪ್ಲೂಟಾರ್ಕನ ಕೃತಿಗಳು ಎರಡು: ಸಮಾಂತರ ಜೀವಗಳು (ಪ್ಯಾರಲಲ್ ಲೈವ್ಸ್) ಮತ್ತು ನೀತಿಮಾಲೆ (ಮೊರೇಲಿಯ). ಮೊದಲನೆಯದರಲ್ಲಿ 23 ಜೊತೆ ಜೀವನ ಚರಿತ್ರೆಗಳೂ 4 ಬಿಡಿ ಜೀವನಚರಿತ್ರೆಗಳೂ ಇವೆ. ಎಂದರೆ 50 ಜೀವನ ಚರಿತ್ರೆಗಳು ಇಲ್ಲಿ ಸಂಕಲನಗೊಂಡಂತಾಯಿತು. ಪ್ರತಿಯೊಂದು ಜೊತೆಯ ಕೆಳಗೂ ಸಾಮ್ಯ ವೈಷಮ್ಯಗಳನ್ನು ಪಟ್ಟಿಮಾಡುವ ಒಂದು ಉಪಸಂಹಾರ ಇದೆ. ಆದರೆ ಇದಾವುದೂ ಪ್ಲೂಟಾರ್ಕನ ಬರೆವಣಿಗೆಯಲ್ಲ. ಆಮೇಲೆ, ಎಂದರೆ ಶತಮಾನಗಳ ತರುವಾಯ, ಯಾರೋ ಬುದ್ಧಿವಂತಿಕೆಯ ಅತಿರೇಕದಿಂದ ಬರೆದು ಸೇರಿಸಿದ್ದು. ಎಷ್ಟು ನೀರಸವೊ ಅಷ್ಟು ಅನುಪಯುಕ್ತ. ಎರಡನೆಯದಾದ ನೀತಿಮಾಲೆ ನಾನಾ ವಿಷಯಗಳನ್ನು ಕುರಿತ ಬೇರೆ ಬೇರೆ ಲಘು ನಿಬಂಧಗಳು. ಪ್ಲೂಟಾರ್ಕನ ಸರ್ವಪ್ರಖ್ಯಾತಿಯೂ ಮೊದಲನೆಯದರ ಮೇಲೆಯೆ ನಿಂತಿದೆ.

	1 ಸ್ವಾತಂತ್ರ್ಯ ಕಳೆದುಕೊಂಡು ಪರಾಧೀನರಾದ ಗ್ರೀಕರಿಗೆ ತಮ್ಮ ದೇಶದ ಉಜ್ವಲ ಅವಧಿಯ ಶ್ರೇಷ್ಠ ವ್ಯಕ್ತಿಗಳನ್ನೂ ಅವರ ಮಹಾ ಸಾಧನೆಗಳನ್ನೂ ನೆನಪಿಗೆ ತಂದುಕೊಂಡು ಮೆಲುಕು ಹಾಕುವುದೊಂದೇ ಸಮಾಧಾನದ ವಿಷಯವಾಗಿದೆ. ಆ ಕಾಲದಲ್ಲಿ ಸೋಲಾನ್ ಪೆರಿಕ್ಲೀಸ್ ಅಲೆಕ್ಸಾಂಡರ್ ಡೆಮಾಸ್ತನೀಸ್ ಮೊದಲಾದವರ ವಿಷಯವಾಗಿ ಸಂಗತಿಗಳನ್ನು ಶೇಖರಿಸುವುದೂ ಸಂಶೋಧನೆ ನಡೆಸುವುದೂ ಪ್ಲೂಟಾರ್ಕನಿಗೆ ಪ್ರಿಯ ಕಾರ್ಯವಾಗಿತ್ತು. ಅವನು ರೋಮಿಗೆ ಹೋದಾಗ ಅಲ್ಲಿನ ನಾಗರಿಕ ಉತ್ಸಾಹಿಗಳು ಪಾಂಪಿ, ಸೀಸರ್ ಕೇಟೊ ಲ್ಯೂಕುಲಸ್ ಬ್ರೂಟಸ್ ಮುಂತಾದವರ ಆಗುಹೋಗುಗಳನ್ನು ಬಿರುಸಿನಿಂದ ಚರ್ಚಿಸುತ್ತಿದ್ದುದನ್ನು ಕಂಡ. ಆ ಎರಡೂ ದೇಶಗಳ ಮಹಾನಾಯಕರ ಸ್ವಭಾವ ಆಶಯ ಸಾಧನೆಗಳಲ್ಲಿ ಸ್ಪಷ್ಟ ಸಾಮ್ಯ ಕಣ್ಣಿಗೆ ಬಡಿಯುವಷ್ಟು ಇರುವುದನ್ನು ಭಾವಿಸಿ ಅವನಿಗೆ ಅಚ್ಚರಿಯೂ ಸಂತಸವೂ ಉಂಟಾಯಿತಾಗಿ ಅವರಲ್ಲಿ ಮುಖ್ಯರಾದವರನ್ನು ಆರಿಸಿಕೊಂಡು ಅವರ ಜೀವನಚರಿತ್ರೆಗಳನ್ನು ತಾನೇಕೆ ಬರೆಯಬಾರದೆಂದು ಆಲೋಚಿಸಿದ. ಅಂಕಿ-ಅಂಶ, ಘಟನೆ ವಿಚಾರಗಳ ಸಂಗ್ರಹಣೆಗೆ ಹೇರಳ ಅವಕಾಶವೂ ಅನುಕೂಲವೂ ಅವನಿಗೆ ಲಭಿಸಿತು. ವಿಶೇಷ ಮುತುವರ್ಜಿಯಿಂದ ಅವನ್ನು ಬಳಸಿಕೊಂಡ. ಆಧಾರ ಸಾಕ್ಷ್ಯವನ್ನಿಟ್ಟುಕೊಳ್ಳದೆ ಬಹುಶಃ ಒಂದು ವಾಕ್ಯವನ್ನೂ ಬರೆಯಲಿಲ್ಲ. ತೀಸಿಯಸ್ ಚರಿತ್ರೆಗೆ ಹೆಲನಿಕಸನಿಂದ ಹಿಡಿದು ಡಯೋಡರಸವರೆಗಿನ 14 ಮೆಗಾರಾ ಚರಿತ್ರಕಾರರನ್ನು ಓದಿದ್ದ. ಲೈಕರ್ಗಸ್ ಚರಿತ್ರೆಯಲ್ಲಿ ಅರಿಸ್ಟಾಟಲನಿಂದ ಹಿಡಿದು ಅರಿಸ್ಟೊಕ್ರೇಟಸನವರೆಗಿನ 20 ಮಂದಿ ಪಂಡಿತರ ಗ್ರಂಥಗಳ ಭಾಗಗಳನ್ನು ಈತ ಉದ್ಧರಿಸಿದ್ದಾನೆ. ರೋಮ್ಯುಲಸ್ ಚರಿತ್ರೆಗೆ ಇಟಲಿಯ ಇತಿಹಾಸವನ್ನು ಬರೆದ ಪ್ರೊಮಾತಿಯೋವನ್ನೇ ಅಲ್ಲದೆ ಡಯೊಕ್ಲಿಸ್ ಹಿರಾಡಟಸ್ ಬ್ಯೂಟಾಸ್ ಇತ್ಯಾದಿ 11 ಗ್ರಂಥಕರ್ತರನ್ನೂ ಆಕರವೆಂದು ಹೆಸರಿಸಿದ್ದಾನೆ. ಕಾರ್ತೇಜಿನ ಸೆಕ್‍ಸ್ಟಿಯಸ್ ಸಲ್ಲ ಎಂಬಾತ ಬಾಯಿ ಮಾತಿನಿಂದ ಕೆಲವು ವಿಚಾರ ಒದಗಿಸಿದನೆಂದೂ ತಿಳಿಸಿದ್ದಾನೆ. ಅಲೆಕ್ಸಾಂಡರ್ ಚರಿತ್ರೆಯಲ್ಲಿ 18 ಗ್ರಂಥಕರ್ತರ ಋಣ ಎದ್ದುಕಾಣುತ್ತದೆ. ಸತ್ಯಾಂಶಕ್ಕೋಸ್ಕರ ಎಷ್ಟು ಶ್ರಮವಹಿಸಿದರೂ ಸಾಲದು ಎಂಬುದು ಪ್ಲೂಟಾರ್ಕನ ಮತವಾಗಿತ್ತು. ಕೆಲವು ಚರಿತ್ರೆಗಳಲ್ಲಿ, ಅದರಲ್ಲೂ ರೋಮನರ ಚರಿತ್ರೆಗಳಲ್ಲಿ, ಪ್ಲೂಟಾರ್ಕ್ ಮಾಡಿದ ಅಧ್ಯಯನ ಸಾಲದೆಂಬುದು ನಿಜ. ಇದರಿಂದಾಗಿ ಕೆಲವು ಕಡೆ ಅಸಾಂಗತ್ಯ ತಲೆ ಹಾಕಿದೆ ಎಂದು ಕೆಲವರ ಅಭಿಪ್ರಾಯ. ಆದರೆ ಎಲ್ಲಿಯೂ ಖಂಡನಯೋಗ್ಯವಾದ ವಿವರ ಕಾಣಬರುವುದಿಲ್ಲ. ಕೆಲವು ವಿವರಗಳಿಗೆ ಸಮಾಧಾನ ಅಗತ್ಯವಾದರೂ ಪ್ಲೂಟಾರ್ಕನ ನಾಯಕರೆಲ್ಲ ರಾಷ್ಟ್ರಸಂಸ್ಥಾಪಕ ರಾಜನೀತಿಜ್ಞರು, ರಾಜ್ಯ ಸಂರಕ್ಷಕರು, ರಾಷ್ಟ್ರ ವಿಸ್ತಾರಕರು ಅಥವಾ ರಾಜಕೀಯ ಕಕ್ಷಿಗಳ ಮುಖಂಡರು. ಅವರಿಗೂ ರಾಷ್ಟ್ರಕ್ಕೂ ಇದ್ದ ಸಂಬಂಧವೇ ಮುಖ್ಯ ವಿಷಯ. ಅವರ ಭಾಷಣ ಬರಹ ಹವ್ಯಾಸ ಮುಂತಾದ ಇತರ ಯಾವ ವಿಚಾರಕ್ಕೂ ಅವನು ಗಮನ ಕೊಟ್ಟಿಲ್ಲ. ಡೆಮಾಸ್ತನೀಸ್ ಸಿಸಿರೊಗಳನ್ನು ಕುರಿತು ಬರೆಯುವಾಗಲೂ ಪ್ಲೂಟಾರ್ಕನಿಗೆ ಬೇಕಾದದ್ದು ರಾಜ್ಯಾಡಳಿತದಲ್ಲಿ ಅವರ ಕೈವಾಡ ಕಾರ್ಯ ಜಯಾಪಜಯ. ಆ ಪ್ರಾಚೀನ ಕಾಲದಲ್ಲಿ ಪ್ರತಿಯೊಬ್ಬ ಮೇಧಾವಿ ಯುವಕನಿಗೂ ರಾಷ್ಟ್ರದ ಜವಾಬ್ದಾರಿ ಹೊರುವ ಕರ್ತವ್ಯಕ್ಕಿಂತ ಅಧಿಕವೆನ್ನಿಸಿಕೊಳ್ಳಬಹುದಾದ ಉದ್ಯೋಗ ಯಾವುದೂ ಇರಲಿಲ್ಲ. ಪ್ಲೂಟಾರ್ಕ್ ಕೇಳುತ್ತಾನೆ: “ಕುಲೀನ ಶ್ರೀಮಂತ ತರುಣ ಯಾವನು ಅನಾಕ್ರಿಯಾನ್ ಪಾಲಿಕ್ಲೀಟಸ್ ಫೀಡಿಯಸ್ ಆಗಲು ಬಯಸುತ್ತಾನೆ?” (ಎಂದರೆ ಕವಿ ಚಿತ್ರಕಲಾವಿದ ಶಿಲ್ಪಿ ಆಗಲಿಚ್ಛಿಸುತ್ತಾನೆ?) ರಾಷ್ಟ್ರಸೇವೆ ಮಾಡಿ ರಾಷ್ಟ್ರ ಕಲ್ಯಾಣ ಸಾಧಿಸುವ ಧ್ಯೇಯದ ಮುಂದೆ ಕಲಾತಜ್ಞನಾಗುವ ದಾರ್ಶನಿಕನಾಗುವ ಆಶೆ ಕಳಪೆ. ಪ್ಲೂಟಾರ್ಕನ ತೀರ್ಮಾನದಂತೆ ಲೈಕರ್ಗಸ್ ಪ್ಲೇಟೊಗಿಂತ ಹೆಚ್ಚು. ಅವನು ರಾಷ್ಟ್ರಸಂವಿಧಾನವೊಂದನ್ನು ಕಟ್ಟಿ ಸ್ಥಾಪಿಸಿದ. ಇವನು ಬಿಟ್ಟು ಹೋದದ್ದು ಬರಿ ಮಾತು, ಪುಸ್ತಕ, ಅಷ್ಟೆ. ರಾಜಕೀಯದ ವಾಂಛಲ್ಯ ಪ್ಲೂಟಾರ್ಕನಲ್ಲಿ ತುಂಬಿ ಸೂಸುತ್ತಿತ್ತು. ಆದರೂ ಅವನ ಸಮಾಂತರ ಜೀವಗಳು ಪ್ರಾಚೀನ ಗ್ರೀಸ್ ರೋಮ್‍ಗಳ ರಾಜಕೀಯ ಚರಿತ್ರೆಯಲ್ಲ, ವಿಶಾಲಾರ್ಥದ ಚರಿತ್ರೆಯೂ ಅಲ್ಲ. ಇದರ ಬಿಡಿ ಭಾಗಗಳನ್ನು ಪಿಕ್ಕಿ ಸೋಡಿಯೂ ಅದನ್ನು ಒಟ್ಟಾಗಿ ಪರಿಭಾವಿಸಿಯೂ ಅಥೆನ್ಸ್ ರಾಷ್ಟ್ರಗಳ ನಾಯಕತ್ವವನ್ನು ಅರ್ಜಿಸಿಕೊಂಡು ತನ್ನ ಅಹಂಕಾರದಿಂದಲೂ ಇತರ ರಾಷ್ಟ್ರಗಳ ಅಸೂಯೆಯಿಂದಲೂ ಪತನ ಹೊಂದಿದ ಟ್ರ್ಯಾಜಿಕ್ ಕಥೆಯನ್ನು ರೋಮ್ ಗಣರಾಜ್ಯವಾಗಿದ್ದು ನಾನಾ ಭೂಭಾಗವನ್ನು ಗೆದ್ದು ಸಾರ್ವಭೌಮತ್ವ ಪಡೆದು ಕೊನೆಗೆ ಅತಿವಿಸ್ತಾರದಿಂದಲೇ ಬಲಹೀನವಾಗಿ ರಾಜತ್ವದಲ್ಲಿ ಲೀನವಾದ ಮಹಾ ನಾಟಕೀಯ ಕಥೆಯನ್ನೂ ನಾವು ಅಂಕ ಅಂಕವಾಗಿ ಪ್ಲೂಟಾರ್ಕನಲ್ಲಿ ಪರಿಚಯ ಮಾಡಿಕೊಳ್ಳಬಹುದು. ಇದು ನಮಗೆ ಸೇರಿದ್ದು, ಗ್ರಂಥಕರ್ತನ ಉದ್ದೇಶ ಇದಾಗಿರಲಿಲ್ಲ. ಇನ್ನೊಂದು ಅಂಶ. ಅಪ್ಟೆಲ್ಲ ಓದಿ ಬರೆದ ಯೋಚನಾಶೀಲನಿಗೆ ತನ್ನದೇ ಆದ ರಾಜ ನೀತಿ ಸಿದ್ಧಾಂತಗಳು ಇರಬೇಕಲ್ಲವೆ? ಯಾವ ಸಿದ್ಧಾಂತವನ್ನೂ ಪ್ಲೂಟಾರ್ಕ್ ತಾತ್ತ್ವಿಕವಾಗಿ ಪ್ರತಿಪಾದಿಸುವುದಿಲ್ಲ; ವ್ಯಕ್ತಿಚಿತ್ರಣ ತನ್ನ ಹಾರ್ದಿಕ ಕಸುಬಾದ್ದರಿಂದ ವ್ಯಕ್ತಿಗಳ ಕಾರ್ಯಾವಳಿಗಳನ್ನು ಮಾತ್ರ ನಮಗೆ ತಿಳಿಸುತ್ತಾನೆ. ತನ್ಮೂಲಕ ಬಾಳಿನ ಎದುರು ನಮ್ಮ ಭಾವ ಭಂಗಿ ಹೇಗಿರಬೇಕೆಂಬುದನ್ನೂ ಉಪದೇಶಿಸುತ್ತಾನೆ. ಪ್ರತಿಯೊಬ್ಬನೂ ಒಂದು ರಾಷ್ಟ್ರದ ಪ್ರಜೆಯಾದ್ದರಿಂದ ಅವನ ಸಂಸ್ಕøತಿ ಬೆಳವಣಿಗೆಯೆಲ್ಲವೂ ರಾಷ್ಟ್ರಕ್ಕಾಗಿ, ಪ್ರಾಪಂಚಿಕ ಜೀವನ ಒಂದು ಅಗಾಧ ರಣರಂಗ. ವ್ಯವಸ್ಥಿತ ರಾಷ್ಟ್ರಗಳೇ ಸೇನೆಗಳು. ಪ್ರಜೆಗಳೇ ಕಾದಾಳುಗಳು. ಕಾದಾಳಿನ ಮುಖ್ಯ ಗುಣಗಳು ಎರಡು_ಧೈರ್ಯ ಮತ್ತು ವಿನಯ ಮರ್ಯಾದೆ. ತನ್ನ ಕಡೆಯವರನ್ನು ಕಂಡು ವಿಶ್ವಾಸದಿಂದ ಮೆಚ್ಚುವಂತೆ ಎದುರಾಳಿಗಳನ್ನು ಕಂಡು ವಿನಯದಿಂದ ಮನ್ನಿಸತಕ್ಕದ್ದು. ಕೆಲವು ನಡೆದ ಸಂಗತಿಗಳನ್ನು ಪ್ಲೂಟಾರ್ಕ್ ವರದಿಗೈದು ತನ್ನ ಇಂಗಿತ ಚಿತ್ತದಲ್ಲಿ ನೆಲೆಸಿ ನಿಲ್ಲುವಂತೆ ಮಾಡುತ್ತಾನೆ. ನಾಯಕ ಡಿಮೆಟ್ರಿಯಸನ ಎದುರು ಅಥೆನ್ಸಿನವರು ದೊಡ್ಡ ತಪ್ಪೊಂದನ್ನು ಎಸಗಿದರು. ಎಲ್ಲರೂ ನಾಟಕಾಲಯದಲ್ಲಿ ಗುಂಪು ಸೇರುವಂತೆ ಅವನು ಹುಕುಂ ಮಾಡಿದ. ಇನ್ನೇನು ಬಲಿಪಶುಗಳಿಗೆ ಯುಕ್ತವಾದ ಕತ್ತಿ ಏಟು ತಮಗೂ ಸಿದ್ಧವಾಗಿದೆಯೆಂದು ಅವರು ಹುದುಗಿನಿಂದಿದ್ದಾಗ ಡೆಮೆಟ್ರಿಯಸ್ ಅವರನ್ನು ಉದ್ದೇಶಿಸಿ ಪುಟ್ಟ ಭಾಷಣವೊಂದನ್ನು ಮಾಡಿ ಸರ್ವರನ್ನೂ ಕ್ಷಮಿಸಿ ಬಿಡುಗಡೆ ಮಾಡಿದ. ಸೀಸರ್ ತನ್ನೆದುರು ಪಿತೂರಿ ಹೂಡಿದ್ದ ಸಿಸಿರೊವನ್ನು ನೋಡಿ ಕುದುರೆಯಿಂದ ಇಳಿದು ಅವನ ಕೈ ಹಿಡಿದು ಸ್ವಲ್ಪ ದೂರ ಅವನೊಂದಿಗೇ ನಡೆದು ಹೋದನಂತೆ. ಸೀಸರನ ಶತ್ರುಗಳು ಅವನ ಜ್ಞಾಪಕಾರ್ಥವಾಗಿ ಕೃಪೆಯ ಗುಡಿಯೊಂದನ್ನು ಕಟ್ಟಿದರು. ಪ್ಲೂಟಾರ್ಕನ ದರ್ಶನದ ತಿರುಳು ಇದು: ಸ್ವಾರ್ಥವನ್ನು ಕಿತ್ತೊಗೆದು ರಾಷ್ಟ್ರಹಿತಕ್ಕಾಗಿ ಬದುಕಿ ಸಾಯುವುದೇ ಮಾನವನ ಪುರುಷಾರ್ಥ, ಕೀರ್ತಿ, ಮುಕ್ತಿ.
	ಪಾತ್ರಗಳನ್ನು ಕಟೆದು ನಿಲ್ಲಿಸುವಾಗ ಪ್ಲೂಟಾರ್ಕ್ ಚಾರಿತ್ರಿಕವೂ ವಾಸ್ತವಿಕವೂ ಆದದ್ದರ ಜೊತೆಗೆ ಜನಶ್ರುತಿ ಐತಿಹ್ಯಗಳ ವೃತ್ತಾಂತವನ್ನೂ ಎಚ್ಚರಿಕೆಯಿಂದ ಸೇರಿಸುತ್ತಾನೆ. ಸೋಲಾನ್ ಮತ್ತು ಕ್ರೀಸಸ್ಸರ ಭೇಟಿ ನಿದರ್ಶನ. ಪಾತ್ರದ ಗುಣಶೀಲಕ್ಕೆ ಸಮಂಜಸವೆಂದು ತೋರಿಬಂದ ವಿವರವನ್ನು ಊಹೆಯೆಂಬ ಕಾರಣದಿಂದ ತಳ್ಳಿಹಾಕುವುದಿಲ್ಲ. ಅಲ್ಲಲ್ಲಿ ಒಂದೊಂದು ಚಿಕ್ಕ ವಾಕ್ಯದಿಂದ ಬೆಳಕು ಚೆಲ್ಲುತ್ತಾನೆ: ಥೆಮಿಸ್ಟಾಕ್ಲೀಸ್ ಅನೇಕ ಸಾರಿ ಏಕಾಕಿಯಾಗಿ ಅಲೆದಾಡುತ್ತಿದ್ದ; ಏತಕೆಂದರೆ `ಮಿಲ್ಟಿಯಾಡಿಸ್ ಗಳಿಸಿದ ವಿಜಯ ಅವನನ್ನು ನಿದ್ರಿಸಲೀಯಲಿಲ್ಲ; ಆಂಟೊನಿ ನೇಮಿಸಿದ ಕೊಲೆಗಾರರು ಸಿಸಿರೊವನ್ನು ವಧಿಸಿ ಅವನ ತಲೆಯನ್ನು ತಮ್ಮ ಸ್ವಾಮಿಗೆ ಒಪ್ಪಿಸಿದರು. ಆಂಟೊನಿ ಭಾಷಣ ವೇದಿಕೆಯ ಮೇಲೆ ಅದನ್ನು ಇರಿಸಿದಂತೆ. ಶ್ರೋತೃಗಳಿಗೆ ಸಿಸಿರೋನ ಮುಖ ಕಾಣಲಿಲ್ಲ. ಆಂಟೊನಿಯ ಜೀವನವೂ ಜಾಯಮಾನವೂ ಮೂರ್ತವಾಗಿ ಕಂಡುಬಂದಿತು. ನಡೆದ ಒಂದು ಉತ್ತಮ ಸಂಗತಿಯನ್ನು ಹೇಳಿ ಪಾತ್ರ, ಪಾತ್ರದ ಬಾಳು-ಎರಡಕ್ಕೂ ಈತ ಕನ್ನಡಿ ಹಿಡಿಯಬಲ್ಲ. ಅಲೆಕ್ಸಾಂಡರ್ ತನ್ನ ದಂಡನ್ನು ದೂರ ದೂರ ಕರೆದೊಯ್ದ ತಾನೆ. ಒಮ್ಮೆ ಅತ್ಯಂತ ನೀರಡಿಕೆ ಅಡಸಿತಾಗಿ ನೀರು ಬೇಡಿದ, ಯಾರೋ ನೀರು ತುಂಬಿದ ಸೀಸಕವನ್ನು ಅವನ ಕೈಯಿಗೆ ಕೊಟ್ಟರು. ಆಗ ತನ್ನ ಹಿಂದೆ ಮುಂದೆ ಸುತ್ತಿದ್ದ ಹಲವು ಸೈನಿಕರು ಕತ್ತುಚಾಚಿ ಸೀಸಕದ ಮೇಲೆ ಕಣ್ಣುಹಾಯಿಸುವುದನ್ನು ನೋಡಿದ. ಕೂಡಲೆ ನೀರನ್ನೂ ಸೀಸಕವನ್ನೂ ತನ್ನ ವಂದನೆಯೊಂದಿಗೆ ದಾತರಿಗೆ ಹಿಂತಿರುಗಿಸಿ `ನಾನು ನೀರನ್ನು ಕುಡಿದರೆ ಇವರೆಲ್ಲ ಪ್ರಜ್ಞೆ ತಪ್ಪಿಬೀಳುತ್ತಾರೆ ಎಂದನಂತೆ. ಸೈನಿಕರು ಹೊಸ ಹುರುಪಿನಿಂದ ಮುಂದಕ್ಕೆ ಸಾಗುತ್ತ ಅಂದರಂತೆ `ನಮಗೆ ಬಳಲಿಕೆಯಿಲ್ಲ, ಬಾಯಾರಿಕೆಯಿಲ್ಲ ನಾವು ಮತ್ರ್ಯಮಾನವರಲ್ಲ, ಇಂಥ ದೊರೆ ನಮಗಿರುವತನಕ ಎಂದು.

	ಸಮಯ ಸನ್ನಿವೇಶ ಘಟನಾವಳಿಗಳ ವರ್ಣನೆಯಲ್ಲೂ ಪ್ಲೂಟಾರ್ಕ್ ಅಸಾಧಾರಣ ಕಲಾತಂತ್ರವನ್ನು ಪ್ರದರ್ಶಿಸಿದ್ದಾನೆ. ಕ್ಲಿಯೊಪಾತ್ರ ದೋಣಿಯಲ್ಲಿ ಆಂಟೊನಿಯನ್ನು ಸಂಧಿಸಲು ಬರುವುದು, ಪಾರ್ತಿಯನರಿಂದ ಕ್ರಾಸಸ್ ಮತ್ತು ಅವನ ಸೈನಿಕರ ಹತ್ಯ ಲ್ಯೂಕ್ಯುಲಸನ ಸಣ್ಣ ದಂಡು ಟೈಗ್ರೇನಿಸ್ ಮತ್ತು ಅವನ ಭಾರಿ ಸೈನ್ಯದ ಮೇಲೆ ಗಳಿಸಿದ ವಿಜಯ, ಅರ್ಬೆಲಾ ಸಂಗ್ರಾಮ_ ಇಂಥಪಟ್ಟಿಯನ್ನು ಬೇಕಷ್ಟು ಬಿಂಬಿಸಬಹುದು. ಪ್ಲೂಟಾರ್ಕನ ಕಲಾವೈವಿಧ್ಯ ಪ್ರಶಂಸಾತೀತ. ಸಾಹಿತ್ಯದ ಸೊಗಸು ಹಾಗಿರಲಿ, ಪ್ರಾಚೀನ ಗ್ರೀಕ್ ಮತ್ತು ರೋಮನರ ನಿತ್ಯ ಜೀವನದ ಪ್ರವಾಹದಲ್ಲೂ ನಾವು ಹರ್ಷೋಲ್ಲಾಸದಿಂದ ಮೀಯುವುದಕ್ಕೆ ಸಾಕಷ್ಟು ಸೌಕರ್ಯ ಒದಗಿಸುತ್ತಾನೆ ಪ್ಲೂಟಾರ್ಕ್.

	ಸಮಾಂತರ ಜೀವನಗಳು ನವೋದಯ ಕಾಲದಿಂದ ತೊಡಗಿ ಇತ್ತೀಚಿನವರೆಗೆ ಪಾಶ್ಚಾತ್ಯರಿಗೆ ಒಂದು ವಿಶ್ವಕೋಶದಂತೆ ಅಗತ್ಯವಾಗಿತ್ತು. ಪ್ಲೂಟಾರ್ಕ್‍ನ ಮುಖ್ಯೋದ್ದೇಶ ವ್ಯಕ್ತಿಚಿತ್ರಣವಾಗಿದ್ದುದರಿಂದ ಮತ್ತಾವ ಸೂತ್ರವೂ ವಿನ್ಯಾಸವೂ ಅವನಿಗೆ ಅವಶ್ಯಕವಾಗಲಿಲ್ಲ. ಅವನ ಗ್ರಂಥ ಎಲ್ಲೊ ಮರೆಯಲ್ಲಿದ್ದು ನವೋದಯ ಕಾಲದಲ್ಲಿ ಪಂಡಿತರ ಕೈಗೆ ಸಿಕ್ಕಿದಾಗ ಅವರು ತಮಗೆ ಸೂಕ್ತವೆಂದು ತೋರಿದ ವಸ್ತುಸಂವಿಧಾನವನ್ನು ತೊಡಿಸಲೋಸುಗ ಅದರ ಅಧ್ಯಾಯಗಳನ್ನು ಸ್ಥಾನಪಲ್ಲಟ ಮಾಡಿದರು, ಉಪಸಂಹಾರಗಳನ್ನು ಸೇರಿಸಿದರು. ಗ್ರೀಸಿನ ಚರಿತ್ರೆಯೂ ರೋಮಿನ ಚರಿತ್ರೆಯೂ ಅವನ ಗುರಿಯಾಗಿತ್ತೆಂದು ಅವರ ತಪ್ಪು ತಿಳಿವಳಿಕೆ. ಏನೇ ಅದರೂ ಮೂಲದ ಮಹಾಲಾವಣ್ಯ ಕುಂದದೇ ನಿಂತಿತು. ಹಲವು ಶತಮಾನಗಳು ಪಾಶ್ಚಾತ್ಯ ಲೋಕಕ್ಕೆ ಪ್ಲೂಟಾರ್ಕನ ಸಮಾಂತರ ಜೀವನಗಳ ಆಳದ ಅಧ್ಯಯನವೊಂದೇ ಸುಸಂಸ್ಕøತನಾಗಲು ಸಾಕೆಂಬ ಅಭಿಮತವಿತ್ತು:

	2 ನೀತಿಮಾಲೆಯ 83 ಪ್ರಬಂಧಗಳಲ್ಲಿ ಜೀವನಕ್ಕೆ ಸಂಬಂಧಿಸಿದ ನಾನಾ ವಿಚಾರಗಳನ್ನು ಕುರಿತ ವಿವರಣೆ ಬುದ್ದಿವಾದ ತುಂಬಿಕೊಂಡಿದೆ. ಪ್ಲೂಟಾರ್ಕ್ ತತ್ತ್ವಶಾಸ್ತ್ರಜ್ಞನಲ್ಲ ದಾರ್ಶನಿಕನಲ್ಲ ಲೋಕವ್ಯವಹಾರವನ್ನು ಬಲ್ಲ ವಿವೇಕಶಾಲಿ ಮಾತ್ರ. ಸಾಮಾನ್ಯವಾಗಿ ನಾವು ಒಪ್ಪಬಹುದಾದ ಮಾತುಗಳನ್ನೆ ಆಡುತ್ತಾನೆ, ಸಲಹೆಗಳನ್ನೆ ಕೊಡುತ್ತಾನೆ. ಸದ್ಗುಣ, ದುರ್ಗುಣವೆಂಬ ಕಿರುಲೇಖದಲ್ಲಿ ಸದ್ಗುಣವೆಂಬುದು ಸೌಖ್ಯಕ್ಕೂ ದುರ್ಗುಣವೆಂಬುದು ಅಸೌಖ್ಯಕ್ಕೂ ಬೇರೆ ಹೆಸರು ಎನ್ನುತ್ತಾನೆ. `ಅದೃಷ್ಟದಲ್ಲಿ ಜೀವನ ಸಾರ್ಥಕ್ಯಕ್ಕೆ ಬುದ್ಧಿಶಕ್ತಿ ಪ್ರಧಾನವೇ ಹೊರತು ಅಕಸ್ಮಾತ್ ಘಟನೆಯಲ್ಲ, ಎಂದು ಘೋಷಿಸುತ್ತಾನೆ. ಬಹು ಗೆಳೆಯರು ಇರುವುದು ಒಳ್ಳೆಯದಲ್ಲ, ಮೈತ್ರಿ ಸತ್ತ್ವವತ್ತಾಗಿರಬೇಕಾದರೆ ಕೆಲವೇ ಕೆಲವು ಯೋಗ್ಯರಿಗೆ ಅದು ಸೀಮಿತವಾಗಿರತಕ್ಕದ್ದು. `ಹೊಗಳುಭಟ್ಟಯಾರು ನೈಜ ಸ್ನೇಹಿತ ಯಾರು, `ಕಾವ್ಯವನ್ನು ಆಲಿಸುವಿಕೆ, ಮದುವೆಯಾದವರಿಗೆ, `ದೇಶಭ್ರಷ್ಟತ್ವ, `ಚಿಕ್ಕ ಹೇಳಿಕೆಗಳು, `ಸ್ತ್ರೀಯ ಸಚ್ಚಾರಿತ್ರ, `ಆಡಳಿತಸೂತ್ರ, `ಕಣಿಹೇಳಿಕೆ ನಿಂತದ್ದೇಕೆ_ಮುಂತಾದವುಗಳಲ್ಲಿ ಒಳ್ಳೆಯ ಅರಿವೂ ದೃಷ್ಟಿಯೂ ಪ್ರದರ್ಶನಗೊಂಡಿವೆ. `ಆರೋಗ್ಯ ನಿಯಮಾವಳಿ ಎಂಬ ಲೇಖನದಲ್ಲಿ ಈಗಿನ ಕಾಲಕ್ಕೆ ಅನುಗುಣವಲ್ಲದ ಕೆಲವು ವಾಕ್ಯಗಳಿವೆ. `ಹಾಲು ಪಾನೀಯವಲ್ಲ, ಆಹಾರ `ವಿರೋಚನ ಮದ್ದಿಗಿಂತ ಪಥ್ಯ ಒಳ್ಳೆಯದು ಪ್ಲೂಟಾರ್ಕನಲ್ಲಿ ಪಾರಿಭಾಷಿಕ ಪದಗಳೂ ಕ್ಲಿಷ್ಟತೆಗಳೂ ಬೇಕಾದಷ್ಟಿವೆ. ಆದರೆ ಕೆಲವು ಮೆಚ್ಚತಕ್ಕ ಹಿತವಚನಗಳೂ ಉಂಟು: ಸೋಮಾರಿತನ ಆರೋಗ್ಯವನ್ನು ಕುದುರಿಸಲಾರದು. ಮತ್ತೆ ಮತ್ತೆ ವೈದ್ಯನ ಬಳಿಗೆ ನಡೆಯುವುದಕ್ಕಿಂತ ತನ್ನ ದೇಹಸ್ಥಿತಿಯ ಸಾಧ್ಯಾಸಾಧ್ಯತೆಯನ್ನು ಅನುಭವದಿಂದ ತಾನೇ ತಿಳಿದುಕೊಳ್ಳುವುದು ಲೇಸು ಇತ್ಯಾದಿ. `ಏಳುಜ್ಞಾನಿಗಳ ಔತಣಕೂಟ ಪ್ಲೇಟೋನ ಸಿಂಪೋಸಿಯಮ್ ಮಾದರಿಯ ಸಂವಾದ. ಹದಿನಾಲ್ಕಕ್ಕೂ ಮೇಲ್ಪಟ್ಟ ಸಂಖ್ಯೆಯ ವಾದ ವಿವಾದಕಾರರಿಗೆ ಪ್ಲೂಟಾರ್ಕ್ ಜಾಗ ಕೊಟ್ಟಿದ್ದಾನೆ. ಆದರೆ ಅವುಗಳಲ್ಲಿ ಹೆಚ್ಚುಗಾರಿಕೆ ಅಷ್ಟೇನೂ ಇಲ್ಲ. `ಕುರುಡು ನಂಬಿಕೆಯೆಂಬ ಶಿರೋನಾಮೆಯ ಪ್ರಬಂಧ ಕುತೂಹಲಜನಕವಾದ್ದು ನಿರೀಶ್ವರವಾದ ಅಜ್ಞಾನ ಹಠಮಾರಿತನ ಇತ್ಯಾದಿ ವಿಷಯಗಳು ಚೆನ್ನಾಗಿ ಪ್ರತಿಪಾದಿತವಾಗಿವೆ. ಡೆಲ್ಛಿ ದೇವಾಲಯದ ಇ ಎಂಬ ಅಕ್ಷರ ಎಂಬ ಲೇಖನ ಪ್ಲೂಟಾರ್ಕನ ಕೌತುಕ ಪರೀಕ್ಷೆಯ ಆಸಕ್ತಿಗೊಂದು ವಿಚಿತ್ರ ನಿದರ್ಶನ. ಹಾಗೆಯೆ `ಚಂದ್ರಬಿಂಬದ ಮೇಲಣ ಮುಖದಲ್ಲಿ ಸೂಕ್ಷ್ಮಪ್ರಜ್ಞೆ ಪ್ರಕಾಶಿತವಾಗಿದೆ. ಸೂರ್ಯಚಂದ್ರರ ದಪ್ಪ ತೂಕ ದೂರಗಳನ್ನು ಕುರಿತು ಲೆಕ್ಕಾಚಾರಗಳು ಇವೆ. ಜೊತೆಗೆ ಚಂದ್ರನಲ್ಲಿಯೂ ಭೂಮಿಯಲ್ಲಿರುವಂತೆ ಆಳದ ಕುಳಿಗಳಿರಬಹುದು, ಮುಖದಂತೆ ತೋರುವುದು ಬಹುಶಃ ನದಿ ಕೊರಕಲುಗಳ ನೆರಳು ಮೊದಲಾದ ಊಹೆಗಳು ಸ್ವಾರಸ್ಯವಾಗಿವೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಅನೇಕ ಸ್ವೀಕಾರಯೋಗ್ಯ ಅಂಶಗಳಿವೆ. ತಂದೆ ಸದ್ವಂಶದವನಾಗಿ ಸಂಯಮಶೀಲನಾಗಿರಬೇಕು; ಸಚ್ಛಾರಿತ್ರಕ್ಕೆ ಸ್ವಭಾವವೂ ಅಗತ್ಯ, ಶಿಕ್ಷಣವೂ ಅಗತ್ಯ; ತಾಯಿ ತನ್ನ ಶಿಶುವನ್ನು ತಾನೇ ಪೋಷಿಸಬೇಕು, ಪ್ರಾಣಿಗಳು ಹೇಗೆ ಮಾಡುತ್ತವೆಯೊ ಹಾಗೆ; ಹುಡುಗನನ್ನು ಶಾಲೆಗೆ ಕರೆದೊಯ್ಯುವ ವೃದ್ಧಸೇವಕ ಪ್ರಾಮಾಣಿಕನೂ ನಂಬಿಕಸ್ಥನೂ ಆಗಿರತಕ್ಕದ್ದು. ಹುಟ್ಟಿನ ಮತ್ತು ಸಂಪತ್ತಿನ ಅನುಕೂಲಗಳು ವಿದ್ಯಾಭ್ಯಾಸದ ಅನುಕೂಲಕ್ಕೆ ಸಮನಲ್ಲ; ಸಾಮಾನ್ಯ ಜನರ ಮುಂದೆ ಭಾಷಣ ಗೈಯ್ಯುವುದು ವಿದ್ಯಾಭ್ಯಾಸದ ಅಂಗವಾಗಲಾರದು; ತತ್ತ್ವಶಾಸ್ತ್ರದ ಅಧ್ಯಯನ ಮುಖ್ಯವಾದದ್ದು, ಆದರೂ ಇತರ ವಿಜ್ಞಾನಗಳನ್ನು ಅಲಕ್ಷಿಸಲಾಗದು. ವ್ಯಾಯಾಮ ಕಡ್ಡಾಯವಾಗಿರಬೇಕು; ಒಟ್ಟಿನ ಮೇಲೆ, ಕೈಮಾಡುವುದಕ್ಕಿಂತ ದಯೆತೋರಿ ಬುದ್ಧಿ ಹೇಳುವುದು ಒಳ್ಳೆಯದು; ಪಟ್ಟು ಹಿಡಿದು ಓದಿ ಓದಿ ಒತ್ತಡದಿಂದ ನರಳದಂತೆ ವಿಶ್ರಾಂತಿಗೆ ಆಸ್ಪದವಿರತಕ್ಕದ್ದು; ತನ್ನ ಮೇಲೆ ತನಗೇ ಹತೋಟಿ ಇರಬೇಕು, ಮುಖ್ಯವಾಗಿ ನಾಲಗೆಯ ಮೇಲೆ; ಬೆಳೆದ ತರುಣ ತಂದೆಯ ಹಿಡಿತದಲ್ಲಿ ಇರತಕ್ಕದ್ದು. ದುಷ್ಟರ ಮತ್ತು ಹೊಗಳುಭಟ್ಟರ ಹವ್ಯಾಸ ವಜ್ರ್ಯ ಮಾಡತಕ್ಕದ್ದು. ತಂದೆಯಾದವರು ತುಂಬ ಕಠಿಣವಾಗಿರಬಾರದು, ಮಕ್ಕಳಿಂದ ತೀರ ಕಷ್ಟವಾದದ್ದನ್ನು ನಿರೀಕ್ಷಿಸಬಾರದು, ತಾನೂ ಒಮ್ಮೆ ಚಿಕ್ಕವನಾಗಿದ್ದುದನ್ನು ಮರೆಯಲಾಗದು; ಸಕಾಲದಲ್ಲಿ ಯುವಕರಿಗೆ ಯುಕ್ತ ವಿವಾಹ ಮಾಡತಕ್ಕದ್ದು; ಮೇಲಾಗಿ ಮಗನಿಗೆ ತಂದೆಯೇ ಮೇಲ್ಪಂಕ್ತಿ. ಈ ಪ್ರಬಂಧದಂತೆ ಸುದೀರ್ಘವಾದ ಇನ್ನೊಂದು ಲೇಖನ `ಪೋಲೋನಿಯಸ್ಸಿಗೆ ಸಾಂತ್ವನ. ಆತನ ಸುಪುತ್ರ ಅಕಾಲಮರಣವನ್ನು ಅಪ್ಪಿದ್ದಕ್ಕಾಗಿ ಪ್ಲೂಟಾರ್ಕ್ ವಿವೇಕ ವಿಚಕ್ಷಣೆಗಳಿಂದ ಸಮಾಧಾನ ಹೇಳುತ್ತಾನೆ: `ಬಾಳಿನಲ್ಲಿ ಏರು ಪೇರು ಉಂಟೇ ಉಂಟು. ವೃದ್ಧಿ ಹಾನಿ ಎರಡು ಸಂದರ್ಭದಲ್ಲೂ ಸಮಚಿತ್ತ ಆವಶ್ಯಕ. ಸಮುದ್ರದಲ್ಲಿ ಮಳೆಗಾಳಿ ಶಾಂತಿ ಎರಡೂ ಇರುವಂತೆ ನೆಲದಮೇಲೆ ಒಳ್ಳೆಯ ಋತು ಕೆಟ್ಟ ಋತು ಎರಡೂ ಇರುವಂತೆ ಬಾಳಿನಲ್ಲೂ ಸುಖದುಃಖಗಳುಂಟು. ಕಷ್ಟಗಳನ್ನು ಅನುಭವಿಸುವುದಕ್ಕಾಗಿಯೇ ಮನುಷ್ಯ ಹುಟ್ಟಿಬಂದಿರುವ (ಇಲ್ಲಿ ಮಿನಾಂಡರನಿಂದ 15 ಉತ್ಕøಷ್ಟ ಪದ್ಯಪಂಕ್ತಿಗಳನ್ನು ಉದ್ದರಿಸಿದೆ). ಶೋಕ ಪಡುವುದು ವ್ಯರ್ಥ, ಮೃತ್ಯು ಅನಿಷ್ಟವಲ್ಲ, ಎಲ್ಲರೂ ತೆರಲೇಬೇಕಾದ ಸಾಲ; ಪ್ಲೇಟೋವಿನ ಉಕ್ತಿ `ಶರೀರ ಆತ್ಮಕ್ಕೊಂದು ಭಾರ ಮತ್ತು ಅಡಚಣೆ ಮರಣದಿಂದ ಸರ್ವನಾಶವಾದರೆ ಸತ್ತವರೂ ಹುಟ್ಟದೇ ಇರುವವರೂ ಸಮಾನ; ಯುಕ್ತಕಾಲಕ್ಕೆ ಮುಂಚೆಯೇ ಅಳಿದನೆಂದು ದುಃಖಪಡುವುದು ಒಂದು ಬಗೆಯಲ್ಲಿ ಸ್ವಾರ್ಥ, ಏತಕ್ಕೆಂದರೆ ಅಳಿದವನು ಸರ್ವರಿಗೂ ಕಾದಿರುವ ಪಯಣದ ಅಂತ್ಯವನ್ನು ಮುಂಚೆಯೇ ಮುಟ್ಟಿದನಲ್ಲವೇ? ಅಕಾಲಮರಣ ಸಹಿಸಲು ಕಷ್ಟವೆಂದಲ್ಲಿ ಈಗತಾನೆ ಜನಿಸಿ ಸತ್ತುಹೋದ ಶಿಶುವಿನ ವಿಚಾರವಾಗಿ ಏನು ಮಾಡುವುದು? ಸತ್ತವ ಬರಬಹುದಾಗಿದ್ದ ಲಾಭಗಳಿಂದ ವಂಚಿತನಾದ ಹಾಗೆಯೇ ನಷ್ಟಗಳಿಂದ ಪಾರಾಗುತ್ತಾನೆ. ಸಾವೆಂಬುದು ದೇವತೆಗಳಿಗೆ ಕೊಡಬೇಕಾದ ಸಾಲವನ್ನು ಅವರು ಕೇಳಿದಾಗ ಕೊಟ್ಟಂತೆ. ಇಲ್ಲಿ ಘನವಿಷಾದ ಸಹಿಸದವರ ಉದಾಹರಣೆಗಳು ಬಂದಿವೆ. ಕೊನೆಯದಾಗಿ, ಸತ್ಪುರುಷರಿಗೆ ಸ್ವರ್ಗವಿದ್ದಲ್ಲಿ ಅಂಥ ಕುಮಾರನಿಗೆ ಅಲ್ಲಿ ಸ್ಥಾನ ಇದ್ದೇ ಇದೆ. ಅನೇಕ ಕವಿ ಜ್ಞಾನಿ ದಾರ್ಶನಿಕರಿಂದ ಉದ್ದರಿಸಿರುವ ವಾಕ್ಯಸಾವಿರ ಪ್ಲೂಟಾರ್ಕನ ವಿಶಾಲ ಅಧ್ಯಯನದ ಮತ್ತು ಧಾರಾಳ ಮನೋಭಾವದ ಕುರುಹು. ಅದೇತಕ್ಕೋ ಹಿರಾಡಟಸನನ್ನು ಕಂಡು ಅವನಿಗೆ ಅಸಮಾಧಾನ, `ಹಿರಾಡಟಸನ ಬದ್ಧವೈರ ಎಂಬ ಒಂದು ಪ್ರಬಂಧವನ್ನೇ ಪ್ಲೂಟಾರ್ಕ್ ಬರೆದಿದ್ದಾನೆ. ಅದಿರಲಿ ನೀತಿಮಾಲೆಯನ್ನು ಪಠಿಸಿ ಮೆಚ್ಚಿಕೊಂಡು ಮಾಂಟೇನ್ ಬೇಕನ್ ಮತ್ತು ಜೆರೆಮಿ ಟೇಲರ್ ಮೊದಲಾದ ಈ ಶತಮಾನದ ಐರೋಪ್ಯರು ಪ್ರಬಂಧ ರಚಿಸಿ ಪ್ರಬಂಧವೆಂಬ ಸಾಹಿತ್ಯ ಪ್ರಕಾರವನ್ನು ಸ್ಥಾಪಿಸಿದರು. ಪ್ಲೂಟಾರ್ಕನ ಎರಡು ಗ್ರಂಥಗಳಿಂದಲೂ ಈಗಲೂ ಪ್ರಯೋಜನ ಪಡೆಯಬಹುದೆಂಬುದು ನಿರ್ವಿವಾದ.	  
  (ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ